ನಸ್ತ್‍ಲೀಖ್
ನಸ್ಖ್ ಮತ್ತು ಕೂಫೀಗಳಂತೆ ಅರಬ್ಬೀ ಬರೆವಣಿಗೆಯ ಒಂದು ಮಾದರಿ. ಇತ್ತೀಚಿನದು. ಇದರಲ್ಲಿ ನಸ್ಖ್ ಹಾಗೂ ತಲೀಖ್ ಶೈಲಿಗಳ ಸಂಯೋಜನೆಯಾಗಿದೆ. ಈ ಶೈಲಿಯಲ್ಲಿ ಅಕ್ಷರಗಳು ಗುಂಡುಗುಂಡಾಗುತ್ತವಾಗಿ ಇಡೀ ಬರೆವಣಿಗೆ ನೋಡಲು ಹಿತವಾಗಿರುತ್ತದೆ. ಈ ಪದ್ಧತಿ ಸುಮಾರು 14ನೆಯ ಶತಮಾನದಲ್ಲಿ ಪ್ರಾದುರ್ಭವಿಸಿದ ಈ ಶೈಲಿ ತಾನು ಉದಿಸಿದ ಸ್ವಲ್ಪಕಾಲದಲ್ಲಿಯೆ ಘನತೆಗೌರವಗಳನ್ನು ಗಳಿಸಿಕೊಂಡು ಬಹು ಜನಪ್ರಿಯವಾಯಿತು. ಇಸ್ಲಾಮೀ ರಾಜ್ಯಗಳ ಪೂರ್ವಭಾಗಗಳಲ್ಲಿ ಉದಾಹರಣೆಗೆ ಇರಾನ್, ಮಧ್ಯ ಏಷ್ಯ, ಆಫ್ಘಾನಿಸ್ತಾನ್ ಮತ್ತು ಭಾರತಗಳಲ್ಲಿ ಈ ಶೈಲಿ ಆಗಿನ ಕಾಲದಲ್ಲಿ ಬಳಕೆಯಲ್ಲಿದ್ದ ಎಲ್ಲ ಲಿಪಿಪದ್ಧತಿಗಳನ್ನೂ ಹಿಂದಕ್ಕೆ ತಳ್ಳಿತು.

ನಸ್ತ್‍ಲೀಖ್ ಶೈಲಿಯ ಮೊದಲ ಲಿಪಿಕಾರನೆಂದರೆ 15ನೆಯ ಶತಮಾನದ ತಬ್‍ರೇಜದ ಮೀರ್ ಅಲೀ. ಮುಂದಿನ ಲಿಪಿಕಾರರಲ್ಲಿ ಪ್ರಸಿದ್ಧನೆಂದರೆ ಸುಲ್ತಾನ್ ಅಲೀ ಮಷಾದೀ. ಅವನನ್ನೂ ಮೀರಿಸಿದವನೆಂದರೆ ಮೀರ್ ಅಲೀ ಹಿರೆವೀ.

ಭಾರತ ಕೂಡ ಆ ಶೈಲಿಯಲ್ಲಿ ಅನೇಕ ಪ್ರವೀಣ ಲಿಪಿಕಾರರನ್ನು ಕೊಟ್ಟಿದೆ. ಅವರಲ್ಲಿ ಕೆಲವು ಪ್ರಮುಖರೆಂದರೆ: ಮಷ್ಕೀನ್ ಖಲಮ್ (ಕಸ್ತೂರಿಕಲಾಮು) ಎಂದು ಪ್ರಸಿದ್ಧನಾದ ಮೀರ್ ಅಬ್ದುಲ್ಲಾಹ್ ತೀರ್ಮಿಜೀ ಮತ್ತು ಆತನ ಮಕ್ಕಳಾದ ಮುಹಮ್ಮದ್ ಸಾಲಿಹ್ ಕಷ್‍ಫೀ ಹಾಗೂ ಮುಹಮ್ಮದ್ ಮೋಮಿನ್. ಜರ್ರೀನ್ ಖಲಮ್ (ಚಿನ್ನದ ಕಲಾಮು) ಎಂದು ಪ್ರಸಿದ್ದನಾದ ಮುಹಮ್ಮದ್ ಹುಸೇನ್ ಕಷ್ಮೀರೀ ಮತ್ತು ಆತನ ಮಗ ಮುಹಮ್ಮದ್ ಅಲೀ. ಷಿರೀನ್ ಖಲಮ್ (ಮಧುರ ಕಲಾಮು) ಎಂದು ಪ್ರಸಿದ್ಧನಾದ ಅಬ್ದುಸ್ ಸಮದ್. ಲಚ್ಚಮನ್ ಸಿಂಘ್. ಪಂಡಿತ ಲಚ್ಚಮಿ ರಾಯ್, ಅಬ್ದುಲ್ ವಹೀದ್ ನಾದಿರ್ ರಖಮ್ (ಅಪರೂಪ ಕಲಾಮು). ಪ್ರೇಮ್‍ನಾಥ, ಲಾಲಾ ದುರ್ಗಪ್ರಸಾದ್, ಶಂಕರನಾಥ, ವಾರಿಥುದ್ ದೀನ್, ಅಘಾಮೀರ್‍ಜಾ ಮತ್ತು ಇತರರು.

ರಾಮ್‍ಪುರದ ನವಾಬರ ಹಾಗೂ ಲಕ್ನೋದಲ್ಲಿನ ಅಯೋಧ್ಯದ ನವಾಬರ ಆಸ್ಥಾನಗಳಲ್ಲಿ ಮತ್ತು ನೈಜಾಮ್ ಮೊದಲಾದ ದಕ್ಷಿಣ ಭಾರತದಲ್ಲಿನ ರಾಜರ ಆಸ್ಥಾನದಲ್ಲೂ ನಸ್ತ್‍ಲೀಖ್ ಪದ್ಧತಿಯ ಅನೇಕ ಪ್ರವೀಣ ಲಿಪಿಕಾರರು ಬಾಳಿ ಬದುಕಿದರು. ಅವರಲ್ಲಿ ಕೆಲವರೆಂದರೆ: ಹಾಫಿಜ್ ನೂರುಲ್ಲಾಹ್, ಹಿದಾಯತ್ ಅಲೀ ವಿಲಾಯತ್ ರಖಮ್, ಅಮೀರ್ ಯಾವರ್ ಜನ್ಗ ಮತ್ತು ಇತರರು. ಈಚಿನವರೆಂದರೆ: ಮೀರ್‍ಜಾ ಹಷಾಮತ್ ಅಲೀ ನಾದಿರ್ ರಖಮ್, ಮುಹಮ್ಮದ್ ಜಾಬೀರ್, ಮುಹಮ್ಮದ್ ಯಾಖೂಬ್ ಅಲೀ ಮತ್ತು ಹೈದರಾಬಾದಿನ ನವಾಬ್ ಮುಈನುದ್ ದೀನ್ ಅಲೀಖಾನ್, ತಾಜು ಷ್ ಷುರಾ ಜರ್ರೀನ್ ಖಲಮ್ ಮತ್ತು ರಾಮಪುರದ ಮುಹಮ್ಮದ್ ಅಲೀಖಾನ್ ಖುಷ್ ರಖಮ್.						
	(ಜûಡ್.ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ